             ಕಾಟ್ಲಾ  

ಭಾರತದಲ್ಲಿ ಸಿಗುವ ಕಾರ್ಪ್ ಜಾತಿಯ ಮೀನುಗಳಲ್ಲಿ ಅತ್ಯಂತ ದೊಡ್ಡದು. ಸಿಹಿನೀರಿನ ವಾಸಿಯಾದ ಇದು ನದಿಗಳಲ್ಲೆಲ್ಲ ಸಾಮಾನ್ಯವಾಗಿ ಕಾಣಬರುತ್ತದೆ. ಕ್ಯಾಟ್ಲ ಇದರ ವೈಜ್ಞಾನಿಕ ನಾಮ. ಸೈಪ್ರಿನಿಡೆ ಕುಟುಂಬಕ್ಕೆ ಸೇರಿದೆ. ದೇಹ ಪಕ್ಕದಿಂದ ಪಕ್ಕಕ್ಕೆ ಒತ್ತಿದಂತಿದೆ. ತಲೆ ಬಹಳ ಅಗಲ, ಕೆಳದುಟಿ ಬಹಳ ಮುಂಚಾಚಿಕೊಂಡಿದೆ. ದೇಹದ ಬಣ್ಣ ಸಾಮಾನ್ಯವಾಗಿ ಮಸುಕು ಬಿಳಿ. ಆದರೆ ಹೆಚ್ಚು ಪಾಚಿಯಿರುವ ನೀರಲ್ಲಿ ವಾಸಿಸುವ ಮೀನು ಕಪ್ಪು ಬಣ್ಣದ್ದಾಗಿರುತ್ತದೆ.

 ಕ್ಯಾಟ್ಲಾ ನೀರಿನ ಮೇಲಿನ ವಲಯದಲ್ಲೇ ಇದ್ದು ನೀರಿನಲ್ಲಿ ತೇಲಾಡುವ ಅತಿ ಸೂಕ್ಷ್ಮ ಪ್ರಾಣಿ ಮತ್ತು ಸಸ್ಯಗಳನ್ನು ತಿಂದು ಜೀವಿಸುತ್ತದೆ. ಮರಿಗಳು ನೀರಿನಲ್ಲಿರುವ ಚಿಗಟ ಮತ್ತು ಇತರ ಸೂಕ್ಷ್ಮ ಪ್ರಾಣಿಗಳನ್ನು ಮುಖ್ಯವಾಗಿ ತಿನ್ನುತ್ತವೆ.

 ಮೀನಿನ ಬೆಳೆವಣಿಗೆ ಶೀಘ್ರಗತಿಯದು. ಮರಿಗಳು ತಿಂಗಳಿಗೆ 3"-4" ಗಳಷ್ಟು ಉದ್ದ ಬೆಳೆಯುತ್ತವೆ. ಪ್ರೌಢಮೀನು ಸುಮಾರು 4' ಗಿಂತಲೂ ಹೆಚ್ಚು ಉದ್ದವಿದ್ದು 40 ಪೌಂಡುಗಳಿಗಿಂತಲೂ ಹೆಚ್ಚು ತೂಗುತ್ತದೆ. ಹೆಸರುಘಟ್ಟದ ಜಲಾಶಯದಲ್ಲಿ 64 ಪೌಂಡಿನ ಹೆಣ್ಣು ಮೀನುಗಳೂ ಸಿಕ್ಕಿವೆ.

 ಕ್ಯಾಟ್ಲಾ ಮೀನಿನ ಸಂತಾನಾಭಿವೃದ್ಧಿಯ ಕಾಲ ಜೂನ್-ಸೆಪ್ಟೆಂಬರ್ ತಿಂಗಳುಗಳು. ಇದು ನದಿಗಳಲ್ಲಿ ಮಾತ್ರ ಮೊಟ್ಟೆಯಿಡುತ್ತದೆ. ಉತ್ತರ ಭಾರತದಲ್ಲಿ ಬೆಸ್ತರು ಈ ಮೊಟ್ಟೆಗಳನ್ನು ಸಂಗ್ರಹಿಸಿ ಮಾರುತ್ತಾರೆ. ಕ್ಯಾಟ್ಲಾ ಮೀನಿಗೆ ಬಹಳ ಬೇಡಿಕೆಯಿದ್ದು ಮೊಟ್ಟೆಗಳ ಮಾರಾಟ ಲಾಭದಾಯಕ ವೃತ್ತಿ ಎನಿಸಿದೆ.

 ಕ್ಯಾಟ್ಲ್ಲಾ ಮೀನು ಬೇರೆ ಮೀನನ್ನು ತಿನ್ನುವುದಿಲ್ಲ. ಅಲ್ಲದೆ, ಇದು ಅತಿವೇಗವಾಗಿ ಬೆಳೆಯುವ ಮೀನು. ಆದ್ದರಿಂದ ಶಾಸ್ತ್ರೀಯ ಮೀನುಪಾಲನೆಯಲ್ಲಿ ಇದರ ಪ್ರಾಮುಖ್ಯ ಬಹಳ. ಸ್ವಲ್ಪ ಕಾಲ ನೀರು ನಿಲ್ಲುವ ಜಲಪ್ರದೇಶದಲ್ಲಿ ಕಡಿಮೆ ಪ್ರಮಾಣದಲ್ಲಿ ತುಂಬಿ ಒಳ್ಳೆಯ ಬೆಳೆಯನ್ನು ಪಡೆಯಬಹುದು. ಸುಮಾರು 6-7 ವರ್ಷಗಳಿಂದ ಪಶ್ಚಿಮ ಬಂಗಾಳದಿಂದ ಇದರ ಮರಿಗಳನ್ನು ಕರ್ನಾಟಕ ರಾಜ್ಯಕ್ಕೆ ಆಮದು ಮಾಡಿ ಕೆರೆ, ಕಟ್ಟೆ ಮತ್ತು ಇತರ ದೊಡ್ಡ ಜಲಾಶಯಗಳಲ್ಲಿ ಬಿತ್ತಲು ವಿಶೇಷ ಪ್ರಯತ್ನಗಳಾಗಿವೆ. ಇದು ಬಹಳ ಒಳ್ಳೆಯ ಆಹಾರ ಮೀನೆಂದು ಪ್ರಸಿದ್ಧವಾಗಿದೆ.        

(ಬಿ.ಎನ್.)

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ